ಖನ್ವಾ ಕದನ -  ಆಗ್ರಾದ ಪಶ್ಚಿಮಕ್ಕೆ ಇರುವ ಖನ್ವಾ ಎಂಬ ಹಳ್ಳಿಯ ಬಳಿ 1527ರಲ್ಲಿ ಮೊಗಲ್ ರಾಜ್ಯಸ್ಥಾಪಕ ಬಾಬರನಿಗೂ ರಜಪೂತ ವೀರ ರಾಣಾ ಸಂಗ್ರಾಮಸಿಂಹನಿಗೂ ನಡುವೆ ನಡೆದ ಘೋರಸಂಗ್ರಾಮ. ಹಿಂದೂಸ್ತಾನದ ಮೇಲೆ ನಡೆಸಿದ ಮೊದಲ ಕದನದಲ್ಲಿ ದೆಹಲಿಯ ಸುಲ್ತಾನ ಇಬ್ರಾಹಿಂ ಲೋದಿಯನ್ನು ಸೋಲಿಸಿ ಅನಂತರ ಆಗ್ರಾ ಬಳಿ ನೆಲೆಸಿದ ಬಾಬರ್ ತನ್ನ ಅಧಿಕಾರವನ್ನು ನೆಲೆಗೊಳಿಸಲು ರಜಪೂತರನ್ನೆದುರಿಸಬೇಕಾಯಿತು. ಮಾರ್ವಾಡ, ಅಂಬರ್, ಗ್ವಾಲಿಯರ್, ಅಜ್ಮೀರ್, ಚಾಂದೇರಿ ರಾಜ್ಯಗಳ ಸೈನ್ಯಗಳ ನಾಯಕತ್ವ ವಹಿಸಿದ ಸಂಗ್ರಾಮಸಿಂಹನ ಅಪಾರ ಸೈನ್ಯ ಬಾಬರನ ಸೈನ್ಯವನ್ನೆದುರಿಸಿತು. ಹಿಂದೂಸ್ತಾನದಲ್ಲಿ ತನ್ನ ಅಳಿವು-ಉಳಿವಿನ ಪ್ರಶ್ನೆಯನ್ನು ನಿರ್ಣಯಿಸುವ ಸಂಗ್ರಾಮವಿದೆಂದು ತಿಳಿದುಕೊಂಡ ಬಾಬರ್ ತನ್ನ ಸೈನಿಕರಿಗೆ ಇದು ಧರ್ಮಯುದ್ಧವೆಂದು ಹೇಳಿ ಪ್ರಾಣದ ಹಂಗು ತೊರೆದು ಹೋರಾಡುವಂತೆ ಕುರಾನಿನ ಮೇಲೆ ಆಣೆಯಿಟ್ಟು ಹುರಿದುಂಬಿಸಿದ. ಮೊಗಲ್ ಸೈನ್ಯಕ್ಕೆ ಜಯ ದೊರಕಿತು. ಉತ್ತರ ಭಾರತದಲ್ಲಿ ಮೊಗಲ್ ಅಧಿಕಾರ ಸ್ಥಿರವಾಯಿತು. ಯುದ್ಧರಂಗದಿಂದ ಸ್ನೇಹಿತರ ಸಹಾಯದಿಂದ ತಪ್ಪಿಸಿಕೊಂಡ ರಾಣಾ ಸಂಗ್ರಾಮಸಿಂಹ ಎರಡು ವರ್ಷಗಳ ತರುವಾಯ ಮೃತನಾದ.	                           		(ಎಚ್.ಆರ್.ಡಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ